ಬ್ಲಾಂಡ್ಯನ್, ಚಾರ್ಲ್ಸ್
	1824-97. ಫ್ರೆಂಚ್ ಕಸರತ್ತುಗಾರ. ಬಿಗಿದ ಹಗ್ಗದ ಮೇಲೆ ನಡೆದು ಚಮತ್ಕಾರ ಪ್ರದರ್ಶಿಸಿ ಲೋಕ ವಿಖ್ಯಾತನಾದ. ನಿಜನಾಮ ಜೀನ್ ಫ್ರಾಂಕೊಯಿಸ್ ಗ್ರ್ಯಾವ್ಲೆ. ಸೇಂಟ್ ಒಮರ್‍ನಲ್ಲಿ ಹುಟ್ಟಿದ, ಐದನೆಯ ವಯಸ್ಸಿನಲ್ಲೇ ಲಿಯೋನ್ಸ್‍ನ ವ್ಯಾಯಾಮಶಾಲೆಗೆ ಸೇರಿ ಕೇವಲ ಆರೇ ತಿಂಗಳಲ್ಲಿ ಮೊದಲ ಪ್ರದರ್ಶನವಿತ್ತು ಅದ್ಭುತ ಬಾಲಕ ಎಂದು ಹೆಸರಾದ. ಅನೇಕ ಬಗೆಯ ಅಂಗಸಾಧನೆ ಹಾಗೂ ಅಸಾಧಾರಣ ದೈಹಿಕ ಚಮತ್ಕಾರಗಳನ್ನು ಲೀಲಾಜಾಲವಾಗಿ ಮಾಡುವಲ್ಲಿ ನಿಷ್ಣಾತ. ಮೂವತ್ತೈದನೆಯ ವಯಸ್ಸಿನಲ್ಲಿ ಈತ ನಯಾಗರ ಜಲಪಾತದ ಒಂದು ಭಾಗದ 360 ಮೀ ಅಗಲವನ್ನು 56 ಮೀ ಎತ್ತರದಲ್ಲಿ ಕಟ್ಟಿದ ಹಗ್ಗದ ಮೇಲೆ ನಡೆದು ದಾಖಲೆ ಮಾಡಿದ. ಪ್ರತಿ ಬಾರಿ ದಾಟುವಾಗಲೂ ಒಂದೊಂದು ಹೊಸ ಚಳಕ ಪ್ರದರ್ಶಿಸುತ್ತಿದ್ದ. ಒಮ್ಮೆ ಕಣ್ಣುಕಟ್ಟಿಕೊಂಡು ನಡೆದರೆ ಮತ್ತೊಮ್ಮೆ ಚೀಲದಲ್ಲಿ ಕಾಲಿರಿಸಿಕೊಂಡು, ಇನ್ನೊಮ್ಮೆ ಚಕ್ರದ ಗಾಡಿ ನೂಕಿಕೊಂಡು, ಮಗುದೊಮ್ಮೆ ಬೆನ್ನಮೇಲೆ ಒಬ್ಬನನ್ನು ಕೂರಿಸಿಕೊಂಡು ನಡೆದು ಬೆರಗುಗೊಳಿಸಿದ. ಒಮ್ಮೆ ಮಾರ್ಗ ಮಧ್ಯೆ ಹಗ್ಗದ ಮೇಲೆ ಕೂತೇ ಆಮ್ಲೆಟ್ ತಿಂದು ಅನಂತರ ಮುಂದೆ ನಡೆದ.

	ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸ್‍ನಲ್ಲಿ 58 ಮೀ ಎತ್ತರದಲ್ಲಿ ಕಟ್ಟದ ಹಗ್ಗದ ಮೇಲೆ ನಡೆಯುವ ಪ್ರದರ್ಶನ ಕೊಟ್ಟ (1861). ಅಲ್ಲಿ ಎತ್ತರಿಸಿದ ಕೋಲು ಕಾಲಿನ ಮೇಲೆ ನಡೆಯುತ್ತ ಲಾಗ ಹಾಕಿ ಮತ್ತೆ ಹಗ್ಗದ ಮೇಲೆ ನಿಂತು ಮುಂದೆ ನಡೆದ. ಇದಾದ ಬಳಿಕ ಪಶ್ಚಿಮ ದೇಶಗಳ ಹಲವಾರು ಕಡೆ ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನಗಳನ್ನು ನೀಡಿ ಹಣ ಕೀರ್ತಿ ಎರಡನ್ನೂ ಗಳಿಸಿದ. 1896ರಲ್ಲಿ ಈತ ಬೆಲ್‍ಫಾಸ್ಟಿನಲ್ಲಿ ಕೊಟ್ಟ ಪ್ರದರ್ಶನವೇ ಕೊನೆಯದು.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ